ಬಂಧು-ಮಿತ್ರರೇ..ತಮಗೆಲ್ಲರಿಗೂ ನಮ್ಮೂರಿಗೆ ಆದರದ ಸ್ವಾಗತ....

Heartly welcome you the people to OUR BARAYAKANYADY....

ಜನಪದ ಹಾಗೂ ಚರಿತ್ರೆ ಕಣ್ಣಲ್ಲಿ ಇಂದಬೆಟ್ಟು ಕಜೆ-ಕನ್ಯಾಡಿ ಸ್ಥಳ ವೈಶಿಷ್ಟ್ಯ

kajekanyady

ಬೆಳ್ತಂಗಡಿ ತಾಲೂಕಿನ ಎಂಬತ್ತೊಂದು ಗ್ರಾಮಗಳಲ್ಲಿ ಇಂದಬೆಟ್ಟು ಗ್ರಾಮವೂ ಒಂದು. ಈ ಗ್ರಾಮ ಹಲವು ಜನಪದೀಯ ಆಚರಣೆ,ಐತಿಹ್ಯ ಹಾಗೂ ಚರಿತ್ರೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅವುಗಳಲ್ಲಿ ಬಾರೆ ಹಾಕುವ ಗದ್ದೆ, ಮೈರನ ಪಾದೆ ಮತ್ತು ಶಿವ-ಪಾರ್ವತಿ ದೇವಸ್ಥಾನಗಳಿಗೆ ಸಂಬಂಧಿಸಿದ ಸಂಗತಿಗಳು ಕುತೂಹಲಕಾರಿಯಾಗಿವೆ. ಈ ಗ್ರಾಮದಲ್ಲಿ ಕಂಡುಬರುವ ಶಾಂತಿನಗರ ಎಂಬ “ ಅಚ್ಚಿನ ಅರಣ್ಯ ”ದ ನಡುವೆ ಬರುವ ಕಜೆ ಎಂಬ ಈ ಹಳ್ಳಿಯಲ್ಲಿ ಹಿಂದೆ ವೀರಶೈವರು ನೆಲೆಸಿದ್ದರೆಂಬುವುದಕ್ಕೆ ಕೆಲವೊಂದು ಕುರುಹುಗಳಿವೆ. ಇದೇ ಪರಿಸರದ ಕಜೆ ಬೈಲಿನ ಮಧ್ಯದಲ್ಲಿ ಬಾರೆ ಹಾಕುವ ಒಂದು ಗದ್ದೆಯಿದೆ,

ಬಾರೆ ಹಾಕುವ ಗದ್ದೆ ಹಾಗೂ ವಿಧಾನ :

ಹಿಂದೆ ಒಕ್ಕಲುತನದ ವ್ಯವಸ್ಥೆ ಎಲ್ಲಾ ಕಡೆಯಂತೆ ಇಲ್ಲೂ ಇತ್ತು, ಊರ ಗೌಡರ ಆಡಳಿತ ಇತ್ತು. ಪ್ರತಿಯೊಂದು ಬೈಲಿನಲ್ಲಿ ಒಂದು ಅಥವಾ ಹೆಚ್ಚು ಬಾರೆ ಹಾಕುವ ಗದ್ದೆಗಳು ಇರುತ್ತಿದ್ದವು. ಈ ಗದ್ದೆಯನ್ನು ಉತ್ತು ಹದ ಮಾಡುವ ದಿನಾಂಕವನ್ನು ಊರಿನ ಗೌಡರು ಪುರೋಹಿತರಲ್ಲಿ ಕೇಳಿಡುತ್ತಿದ್ದರು. ಮೊದಲು ಈ ಗದ್ದೆಗೆ ಪೂರ್ವಾಭಿಮುಖವಾಗಿ ಪಶ್ಚಿಮದಿಂದ ‘ ಕಾಪನ ‘ ಎತ್ತಿನ ಜೋಡಿ ಇಳಿಯುತ್ತದೆ ತದನಂತರ ಊರಿನ ಎಲ್ಲರ ಎತ್ತಿನ ಅಥವಾ ಕೋಣದ ಜೋಡಿಗಳು ಇಳಿಯುತ್ತದೆ. ಆಗ ಎಲ್ಲರೂ ಪ್ರತಿಫಲಾಪೇಕ್ಷೆಯಿಲ್ಲದೇ ಊಳಬೇಕು. ಕಾಪನ ಎತ್ತನ್ನು ಸ್ವಲ್ಪ ಉಲುಮೆ ಮಾಡಿದ ನಂತರ ಒಂದು ಬದಿಯಲ್ಲಿ ನಿಲ್ಲಿಸಿ ಅದನ್ನು ಊಳುವವನು ‘ ಬಾರೆ ಸೂಣ ‘ (೩ ಕೋಲುಗಳು) ಹಾಗೂ ಹಾರೆಯನ್ನು ತಯಾರು ಮಾಡಲು ಹೋಗುತ್ತಾನೆ.

ಗದ್ದೆ ಉತ್ತು ಹದ ಮಾಡಿದ ನಂತರ ಶಾಸ್ತ್ರದ ಪ್ರಕಾರವಾಗಿ ಎಲ್ಲಾ ಕೋಣಗಳನ್ನು ಪೂರ್ವಾಭಿಮುಖವಾಗಿ ಮೇಲೆ ಬಿಡುತ್ತಾರೆ. ನಂತರ ಶಾಸ್ತ್ರೋಕ್ತವಾಗಿ ‘ ಕುರಿಮುದುರೆ ‘ ಯನ್ನಿಟ್ಟು (ಕುರಿ ಎಂದರೆ ಕುರಿನೀರು= ಅರಿಶಿನ,ಸುಣ್ಣ ಮತ್ತು ಕುಂಕುಮಗಳನ್ನು ಹಾಕಿ ಮಿಶ್ರಣಮಾಡಿದಂತಹ ನೀರು. ಮುದುರೆ ಅಂದರೆ=ನೈವೇದ್ಯ) ಕುರಿನೀರನ್ನು ಎತ್ತಿನ ಜೋಡಿಗೆ ಮಾವಿನ ಎಲೆಯಲ್ಲಿ ಸಿಂಪಡಿಸಿ ನಂತರ ಪೂರ್ವಾಭಿಮುಖವಾಗಿ ಗದ್ದೆಯಿಂದ ಮೇಲೆ ಹತ್ತಿಸಿ ಹಟ್ಟಿಯಲ್ಲಿ ಕಟ್ಟುತ್ತಾರೆ. ಆ ದಿನ ಆ ಎತ್ತನ್ನು ತೊಳಿಯುವಂತಿಲ್ಲ ಹಾಗೂ ಅವುಗಳನ್ನು ಮೇಯಲೂ ಸಹ ಬಿಡುವಂತಿಲ್ಲ. ಏಕೆಂದರೆ ಆ ದಿನ ಮಾತ್ರ ಊರಿನ ಹುಲಿ ಎತ್ತನ್ನು ಹಿಡಿಯುತ್ತದೆಯಂತೆ. ಗದ್ದೆ ಹದ ಮಾಡಿದ ನಂತರ ೩ ಜನ ಕಾಪರು (ಗಾಳಿಯ)ಬಾಳೆಗಿಡವನ್ನು,ಸೂಣವನ್ನು ಮತ್ತು ಹಾರೆಯನ್ನು ಹಿಡಿದುಕೊಂಡು ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಬದುವಿನ ಮಧ್ಯಭಾಗದಿಂದ ಇಳಿದು ಗದ್ದೆಯ ಮಧ್ಯ ಭಾಗಕ್ಕೆ “ಉಲ್ಲಯ ಬಾರೆ ಪಾಡುವೆ” ಎಂದು ಹೇಳಿಕೊಂಡು ಬರುತ್ತಾರೆ. ಮಧ್ಯದಲ್ಲಿ ಹಾರೆಯಿಂದ ಒಂದು ಗುಂಡಿ ತೆಗೆದು “ ನೇಲ್ಯರೇ… ಬಾಣಯೇ.. ಉಲ್ಲಯಾ…ಬಾರೆ ಪಾದುವೆ” ಎಂದು ೩ ಬಾರಿ ಹೇಳಿ ಬಾಳ್ಲೆಗಿಡ ನೆಟ್ಟು ಅದು ಬೀಳದಂತೆ ಸುತ್ತ ಸೂಣಗಳಿಂದ ಬಲಕೊಟ್ಟು ಭದ್ರವಾಗಿ ಬಿಗಿಯುತ್ತಾರೆ. ನಂತರ ಬಾಳೆಗಿಡಕ್ಕೆ ೩ ಸಲ ಸುತ್ತು ಬಂದು ಅದಕ್ಕೆ ನೀರೆರೆದು ಪೂರ್ವಾಭಿಮುಖವಾಗಿ ಮುಂದುವರಿದು ಮೇಲೆ ಹತ್ತಿದ ನಂತರ ದಕ್ಷಿಣಕ್ಕೆ ತಿರುಗುತ್ತಾರೆ. ನಂತರ ಊರ ಗೌಡರ ಮನೆಗೆ ಹೋಗಿ ಊಟದ ಸಮಾರಂಭವು ನಡೆಯುತ್ತದೆ. ಅಂದು ವಿಶೇಷವಾಗಿ ಕಾಪರಿಗೆ ೫ ಬಾಳೆ ಎಲೆಯಲ್ಲಿ ಬಡಿಸಿ ನಂತರ ಉಳಿದವರು ಭೋಜನ ಮಾಡುತ್ತಾರೆ. ಆ ದಿನ ಆ ಗದ್ದೆಗೆ ಯಾರೂ ಇಳಿಯುವಂತಿಲ್ಲ. ಮರುದಿನ ಆ ಗದ್ದೆಯಲ್ಲಿ ಎಲ್ಲರೂ ಸೇರಿ ನಾಟಿ ಮಾಡುತ್ತಾರೆ. ಈ ಬಾಳೆಗಿಡ ಕೆಲವೊಮ್ಮೆ ಗೊನೆ ಹಾಕುವುದೂ ಇದೆ. ಸುಗ್ಗಿಯ ಬೆಳೆಯಲ್ಲಿ ಬಾಳೆಗಿಡವನ್ನು ಹಾಕುತ್ತಾರೆ. ವಿಶೇಷವಾಗಿ ಈ ಗದ್ದೆಗೆ ಯಾವುದೇ ಸೂತಕದವರು ಇಳಿಯುವಂತಿಲ್ಲ. ಹಾಗೆಯೇ ಮಾಸವೃತ್ತದಲ್ಲಿರುವ ಸ್ತ್ರೀಯರೂ ಈ ಗದ್ದೆಗೆ ಇಳಿಯುವಂತಿಲ್ಲ.

ಈ ಬಾಳೆಗಿಡ ಹಾಕುವ ಗದ್ದೆಯಲ್ಲಿ ಪೂರ್ವಾಭಿಮುಖವಾಗಿ ಹೂತಿರುವ ಶಿವಲಿಂಗ ಹಾಗೂ ಅರ್ದ ಚಂದ್ರಾಕೃತಿಯಿರುವ ಕೆತ್ತನೆಯ ಶಿಲಾಶಾಸನವು ಕಂಡುಬರುತ್ತದೆ. ಈ ಶಾಸನವು ಲಿಂಗಾಯತರ ಕಾಲದ್ದಾಗಿದೆ. ಹಾಗೂ ಲಿಂಗಾಯತರ ನೆಲೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಇದು ನೀಡುತ್ತದೆ. ಅಲ್ಲಿನ ಅಚ್ಚಿನ ಅರಣ್ನ್ಯದ ಕಡೆಗೆ ಹೋಗುವಾಗ ಅಲ್ಲೊಂದು ದೊಡ್ಡ ಬಂಡೆಕಲ್ಲು ಕಾಣಸಿಗುತ್ತದೆ.

ಈ ಎಲ್ಲಾ ಪ್ರದೇಶಗಳು ತಮ್ಮದೇ ಆದ ಹೆಸರು ಹೊಂದಿರುವಂತೆ ಇದೂ ಕೂಡ ವಿಶಿಷ್ಟವಾದ ತನ್ನದೇ ಆದ ಹೆಸರು ಹೊಂದಿದೆ.ಅಂದರೆ ಈ ಬಂಡೆಕಲ್ಲನ್ನು “ ಮೈರನ ಪಾದೆ “ ಎಂದು ಕರೆಯುತ್ತಾರೆ. ಈ ಮೈರನ ಪಾದೆಯ ಮೇಲೆ ಬೇಸಿಗೆಯಲ್ಲಿ ನವಿಲುಗಲು ಅಣಿಯಿಟ್ಟು ನರ್ತನ ಮಾಡುತ್ತಿತ್ತು. ನವಿಲಿಗೆ ತುಳುವಿನಲ್ಲಿ “ ಮೈರಾ” ಎಂದು ಕರೆಯುತ್ತಾರೆ. ಮೈರಾ ಮತ್ತು ಪಾದೆ ಎಂಬ ತುಳುಭಾಷೆಯ ೨ ಶಬ್ದಗಳು ಸೇರಿ ಮೈರನ ಪಾದೆ ಎಂದು ಹೆಸರಾಗಿದೆ.

ಮೈರನ ಪಾದೆಯ ಹುಟ್ಟು :

ಬಹಳ ವರ್ಷಗಳ ಹಿಂದೆ ಇದು ನೀರಿನಿಂದ ತುಂಬಿ ತುಳುಕುತಿದ್ದ ಒಂದು ಪ್ರದೇಶವಾಗಿತ್ತು. ಹಿಂದೆ ಇಲ್ಲಿ ಬೇಸಾಯವನ್ನು ಕೂಡಾ ಮಾಡುತ್ತಿದ್ದರು. ವರ್ಷಪೂರ್ತಿಯಾಗಿ ನೀರಿನಿಂದ ತುಂಬಿ ತುಳುಕುತ್ತಿದ್ದ ಈ ಪ್ರದೇಶ ಕೃಷಿಗೆ ಯೋಗ್ಯವಾಗಿತ್ತು. ಅಂದು ಇಲ್ಲಿ ೩ ಬೆಳೆಯನ್ನು(ಸುಗ್ಗಿ,ಎನೆಲ್ & ಕೊಳಕ್ಕೆ) ಬೆಳೆಯುತ್ತಿದ್ದರು. ಹಾಗೆ ಒಂದು ದಿನ ರೈತನು ಗದ್ದೆಯನ್ನು ಊಳುತ್ತಿದ್ದ ಸಂಮ್ದರ್ಭದಲ್ಲಿ ಆ ಪ್ರದೇಶವು (ಗದ್ದೆ) ಒಂದು ದೊಡ್ಡ ಬಂಡೆ ಕಲ್ಲಿನಾಕಾರದಲ್ಲಿ ಎದ್ದು ನಿಂತಿತು. ಆ ಸಮಯದಲ್ಲಿ ರೈತನು ಗದ್ದೆಯಿಂದ ಓಡಿ ಹೋದನು. ಅವನು ಓಡಿಹೋದ ಹೆಜ್ಜೆ ಮತ್ತು ಗದ್ದೆಯನ್ನು ಉಳುಮೆ ಮಾಡಿದ ಬರೆಗಳು ಕಳೆದ ೫ ವರ್ಷಗಳವರೆಗೂ ಕಂಡು ಬರುತ್ತಿದ್ದವು. ಆ ಬಂಡೆಯ ತುದಿಯನ್ನು ಈಗ ಪುಡಿಗೈದಿದ್ದಾರೆ. ಆನಂತರ ಸರಕಾರದ ಗಮನಕ್ಕೆ ತಂದು ಕಲ್ಲು ಅಗೆಯುವುದನ್ನು ನಿಲ್ಲಿಸಲಗಿದೆ. ಈಗ ಈ ಕಲ್ಲಿನಲ್ಲಿ ಉತ್ತರಕ್ಕೆ ಯವುದೋ ಒಂದು ಪ್ರಾಣಿ ಅಥವಾ ಮನುಷ್ಯನು ಓಡಿ ಹೋದ ಹೆಜ್ಜೆಗಳು ಕಂಡುಬರುತ್ತದೆ. ಆದರೆ ಪ್ರಾಣಿಯ ಹೆಜ್ಜೆಗಳೇ,ಅಥವಾ ಮನುಷ್ಯನ ಹೆಜ್ಜೆಗಳೇ ಎಂದು ಸರಿಯಾಗಿ ಗೋಚರಿಸುವುದಿಲ್ಲ. ಓಡಿಹೋದ ಕೋಣಗಳು ಇಂದಬೆಟ್ಟುವಿನಲ್ಲಿ ಎರಡು ಕಲ್ಲಾಗಿ ನೆಲೆಯಾಗಿವೆ ಎಂದು ಪ್ರತೀತಿಯಿದೆ.

ಈ ಮೈರನ ಪಾದೆಯ ಮೇಲೆ ಹುಲಿಯ ಗುಹೆಯೊಂದಿತ್ತು. ಅದರಲ್ಲಿ ಊರಿನ ಹುಲಿ ವಾಸವಾಗಿತ್ತು. ಆದ್ದರಿಂದ ಆ ಪ್ರದೇಶಕ್ಕೆ ಜನರ ಸಂಚಾರ ತುಂಬಾ ವಿರಳವಾಗಿತ್ತು. ಹೀಗಿರುವಾಗ ಒಂದು ದಿನ ದನವು ಮೇಯುತ್ತಾ ಅತ್ತಕಡೆಗೆ ಹೆಜ್ಜೆ ಹಾಕಿತು. ಅದನ್ನು ಕಂಡ ಹುಲಿಯು ದನವನ್ನು ಹಿಡಿದು ತಿನ್ನಲು ಯತ್ನಿಸಿದಾಗ ದನವು ತನ್ನ ಬಲವಾದ ಕೊಂಬುಗಳಿಂದ ಹುಲಿಯನ್ನು ಎದುರಿಸಲು ಮುಂದಾಯಿತು ಹೀಗೆ ಪರಸ್ಪರ ಗುದ್ದಾಟಗಳು ನಡೆಯುತ್ತಿದ್ದಂತೆಯೇ ಯಾವುದೂ ಕೂಡಾ ಗೆಲ್ಲದೇ,ಯವುದೂ ಸೋಲದೆ ಅಲ್ಲಿಂದ ಮಾಯವಾದವು.ಅವುಗಳು ಪರಸ್ಪರ ಗುದ್ದಾಡಿಕೊಂಡಾಗ ಮೂಡಿದ ಪಾದಗಳ ಹೆಜ್ಜೆಗಳು ಆ ಮೈರನ ಪಾದೆಯ ಹತ್ತಿರ ಕಂಡುಬರುತ್ತಿತ್ತು ಎಂಬುವುದು ಹಿರಿಯರ ಅಭಿಮತ.

ಶಿವಪಾರ್ವತಿ ದೇವಸ್ಥಾನ :

ಕನ್ಯಾಡಿ ಮತ್ತು ಕಜೆ ಹಳ್ಳಿಗಳು ಪರಸ್ಪರ ಅಣ್ಣ-ತಮ್ಮಂದಿರಂತೆ. ಹಿಂದೆ ಈ ಅಣ್ಣ-ತಮ್ಮಂದಿರು ಒಂದಾಗಿದ್ದರು. ಸರಕಾರದ ಆಡಳಿತ ಬಂದ ನಂತರ ಕನ್ಯಾಡಿ-Ist ಮತ್ತು ಕಜೆ ಎರಡೂ ಬೇರೆಬೇರೆಯಾಗಿ ಬೇರ್ಪಟ್ಟವು. ಈ ಎರಡು ಪ್ರದೇಶಗಳ ನಡುವೆ ಶಿವ-ಪಾರ್ವತಿಯರ ದೇವಾಸ್ಥಾನವಿತ್ತು. ಇಂದು ಈ ದೇವಸ್ಥಾನವು ಈ ಎರಡೂ ಪ್ರದೇಶಗಳ ಮಧ್ಯದಲ್ಲಿದೆ. ಈ ದೇವಸ್ಥಾನವು ಸುಮಾರು ೭೦೦ ವರ್ಷಗಳಿಗಿಂತಲೂ ಹಳೆಯದು. ಇದನ್ನು ‘ಬಂಗ ಮನೆತನ’ದ ಅರಸರು ವೀರಶೈವರಿಗೆ ಕಟ್ಟಿಸಿ ಕೊಟ್ಟಿರಬಹುದೆಂದು ಅಂದಾಜಿಸಬಹುದು. ಕನ್ಯಾಡಿಯಲ್ಲಿ ದೈವಗಳಿಗೆ ಕೋಲಗಳು ನಡೆಯುವ ಸಂದರ್ಭದಲ್ಲಿ ಈ ದೇವಸ್ಥಾನದಿಂದ ತೀರ್ಥವನ್ನು ಕೊಂಡುಯ್ಯುತ್ತಿದ್ದರು. ದುರಾದೃಷ್ಟವೆಂದರೆ, ಈ ದೇವಸ್ಥಾನವು ಇನ್ನೂ ಯಾರ ಕಣ್ಣಿಗೂ ಗೋಚರಿಸಿಲ್ಲ. . ಈ ದೇವಾಲಯದ ಪುನರುತ್ಪತ್ತಿಗೆ ಸಂಬಂಧಿಸಿದಂತೆ ಜನರಲ್ಲಿ ಹಲುವು ಬಗೆಯ ಸಮಸ್ಯೆಗಳು ಕಂಡುಬರುತ್ತಿದೆ.